Saturday, 24 August 2013


ಕಸಾಯಿಖಾನೆಗೆ ಅಕ್ರಮ ಗೋ ಸಾಗಾಟ ಆರೋಪ ಸತ್ಯಕ್ಕೆ ದೂರವಾದ ವಿಚಾರ- ಎ.ಆರ್. ಚಂದ್ರ
 ಪುತ್ತೂರು ತಾಲೂಕಿನ ಸವಣೂರಿನಲ್ಲಿ ಕಸಾಯಿಖಾನೆಗೆ ಅಕ್ರಮವಾಗಿ ಗೋಸಾಗಾಟ ನಡೆಸಲಾಗುತ್ತಿತ್ತು ಎನ್ನುವುದು ಸತ್ಯಕ್ಕೆ ದೂರವಾದ ವಿಚಾರವಾಗಿದ್ದು , ಅಲ್ಲಿ ದನಗಳನ್ನು ಕದ್ದು ಸಾಗಾಟ ಮಾಡಲಾಗಿಲ್ಲ. ತೋಟಕ್ಕೆ ನುಗ್ಗಿ ಹಾನಿ ಮಾಡಿದ ದನಗಳನ್ನು ಅಲ್ಲಿನ ಕೃಷಿಕರು ಕಟ್ಟಿ ಹಾಕಿ ತನಗೆ ಮಾಹಿತಿ ನೀಡಿ ಗೋ ಆಶ್ರಮಕ್ಕೆ ಪಿಕಫ್ ವಾಹನದಲ್ಲಿ ತಂದಿದ್ದರು. ಈ ಘಟನೆಯ ವೇಳೆ  ದನದ ಮಾಲಕ ಹಾಗೂ ಇತರ ಸುಮಾರು 100ಕ್ಕೂ ಅಧಿಕ ಮಂದಿ  ಸೇರಿಕೊಂಡು ಘಟನೆಯನ್ನು ವಿಷಯಾಂತರಗೊಳಿಸಿ  ಅಪಪ್ರಚಾರ ನಡೆಸಿದ್ದಾರೆ ಎಂದು ಸವಣೂರಿನ ಭಾರತೀಯ ಭಾವೈಕ್ಯತಾ ಪ್ರತಿಷ್ಠಾನದ ಸಂಚಾಲಕ , ಗೋಕುಲಂ ಗೋಶಾಲೆಯ ಎ.ಆರ್.ಚಂದ್ರ ಎಡಪತ್ಯ ಅವರು ಹೇಳಿದರು. 
ಪುತ್ತೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆ.21ರಂದು ರಾತ್ರಿ  ಸವಣೂರಿನ ಆರೆಲ್ತಡ್ಕದ ಕೃಪಿಕರಾದ ಪ್ರಕಾಶ್ ಎಂಬವರು ನಾರಾಯಣ ಎಂಬವರ ಮೊಬೈಲ್ ಮೂಲಕ ತನಗೆ ಕರೆ ಮಾಡಿ ತಮ್ಮ ತೋಟಕ್ಕೆ ನುಗ್ಗಿದ 4 ದನಗಳನ್ನು ಕಟ್ಟಿಹಾಕಿದ್ದೇವೆ. ನಿಮ್ಮ ಆಶ್ರಮಕ್ಕೆ ಅದನ್ನು ತರುತ್ತೇವೆ .ಅದನ್ನು ನೀವು ಸ್ವೀಕಾರ ಮಾಡಬೇಕು ಎಂದಿದ್ದರು. ಸ್ವೀಕರಿಸಲು ಅಡ್ಡಿಯಿಲ್ಲ. ಆದರೆ ನಾಳೆ ಬೆಳಿಗ್ಗೆ ತಂದರೆ ಒಳ್ಳೆಯದ್ದು , ಇಲ್ಲದಿದ್ದರೆ ಪೊಲೀಸ್ ಠಾಣೆಗೆ ತಿಳಿಸಿ ಬರಹ ಮೂಲಕವೇ ಆಶ್ರಮಕ್ಕೆ ಒಪ್ಪಿಸಬೇಕು ಎಂದು ತಾನು ತಿಳಿದಿದ್ದೆ. ಈ ಬಗ್ಗೆ ತಾಲೂಕು ಪಂಚಾಯಿತಿ ಸದಸ್ಯ ದಿನೇಶ್ ಮೆದು ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ ಬಳಿಕ ಆಶ್ರಮಕ್ಕೆ ತರುವಂತೆ ಹೇಳಿದ್ದೆ . ಅದರಂತೆ ಅವರು ದನಗಳನ್ನು ಆಶ್ರಮಕ್ಕೆ ಪಿಕಪ್ ವಾಹನದಲ್ಲಿ ತಂದಿದ್ದರು. ಆ ವೇಳೆ ದನಗಳ ವಾರಿಸುದಾರ ಉಸ್ಮಾನ್ ಸೇರಿದಂತೆ ಸುಮಾರು ನೂರಕ್ಕಿಂತಲೂ ಅಧಿಕ ಮಂದಿ ಗೋಶಾಲೆಯ ಬಳಿ ಜಮಾಯಿಸಿ ಗೊಂದಲ ಸೃಷ್ಟಿಸಿದರು. ಘಟನೆಯ ವಿಷಯಾಂತರಿಸಿ ಅಪಪ್ರಚಾರ ಎಬ್ಬಿಸಿದರು . ಆ ಸಂದರ್ಭದಲ್ಲಿ ಈ ಬಗ್ಗೆ  ತಾನೇ ಪೊಲೀಸರಿಗೆ ದೂರು ನೀಡಿದ್ದೆ ಎಂದು ಅವರು ತಿಳಿಸಿದರು.
ತಾನು ದನಗಳನ್ನು ಗೋಶಾಲೆಗೆ ಸೇರಿಸಲು ನಿರಾಕರಿಸಿಲ್ಲ . ಆದರೆ ಆ ವಿಚಾರದಲ್ಲಿ ತಪ್ಪು ಸುದ್ದಿ ಬಿತ್ತರವಾಗಿದೆ. ಈ ಘಟನೆಗೆ ಸಂಬಂಧಿಸಿ ರಾಜಕೀಯ ಲಾಭ ಪಡೆಯುವ ಕೆಲಸ ನಡೆದಿದೆ. ಪೊಲೀಸರ ಆಗಮನದ ಬಳಿಕ ಮುಗಿಯುವ ಹಂತದಲ್ಲಿದ್ದ ಪ್ರಕರಣವನ್ನು ದೊಡ್ಡದಾಗಿಸುವ ಕೆಲಸ ನಡೆದಿದೆ ಎಂದು ಅವರು ತಿಳಿಸಿದರು.
ಪ್ರಮಾಣಕ್ಕೆ ಬರಲಿ -ಸವಾಲು : 
ದನಗಳನ್ನು ಕದ್ದು ಕಖಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂದು ಆರೋಪ ಮಾಡುವವರು ಯಾವುದೇ ಕ್ಷೇತ್ರದಲ್ಲಿ ಪ್ರಮಾಣ ಮಾಡಲು ಮುಂದಾಗಲಿ .ನಾವು ಅದಕ್ಕೆ ಸಿದ್ದ ಎಂದು ತಾಲೂಕು ಪಂಚಾಯಿತಿ ಸದಸ್ಯ ದಿನೇಶ್ ಮೆದು ಸವಾಲು ಹಾಕಿದರು. ಉಸ್ಮಾನ್ ಅವರ ದನಗಳು ತೋಟಕ್ಕೆ ನುಗ್ಗಿ ಕೃಷಿ ಹಾನಿ ಮಾಡುತ್ತಿರುವ ಕುರಿತು ಆರೆಲ್ತಡ್ಕದ ಕೃಷಿಕರು 6 ತಿಂಗಳ ಹಿಂದೆಯೇ ಪಂಚಾಯಿತಿಗೆ ದೂರು ನೀಡಿದ್ದರು. ಅದಕ್ಕೂ ಮುನ್ನ ಕಡಬ ಪೊಲೀಸರಿಗೂ ದೂರು ಸಲ್ಲಿಸಿದ್ದರು. ಪಂಚಾಯಿತಿಯಿಂದ ಅವರಿಗೆ ಈ ಕುರಿತು ನೋಟೀಸು ಕೂಡ ನೀಡಲಾಗಿತ್ತು. ಆದರೆ ಉಸ್ಮಾನ್ ಅವರು ಹಗಲು ಹೊತ್ತಿನಲ್ಲಿ ದನಗಳನ್ನು ಕಟ್ಟಿ ಹಾಕಿ ರಾತ್ರಿ ವೇಳೆ ಬಿಡುತ್ತಿದ್ದರು. ಮೂರು ದಿನಗಳ ಹಿಂದೆ  ದನಗಳನ್ನು ಬಿಡಬೇಡಿ . ಕೃಷಿ ಹಾನಿ ಮಾಡುತ್ತಿವೆ ಎಂದು ಸ್ಥಳೀಯ ಕೃಷಿಕರೊಬ್ಬರು ವಿನಂತಿಸಿಕೊಂಡಿದ್ದರು. ಆದರೂ ಅವರು ಅದನ್ನು ಲೆಕ್ಕಿಸದ ಕಾರಣ ತಾನೇ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದೆ.  ಆ ವೇಳೆ ಪೊಲೀಸರು ತೋಟಕ್ಕೆ ನುಗ್ಗಿ ಕೃಷಿ ಹಾನಿ ಮಾಡುವ ದನಗಳನ್ನು ಸ್ಥಳೀಯ ಗೋಶಾಲೆಗೆ ಕೊಡಿ. ಬಳಿಕ ಅವರು ದಾಖಲೆ ಕೊಟ್ಟು ಬಿಡಿಸಿಕೊಂಡು ಹೋಗಲಿ ಅಂದಿದ್ದರು. ಈ ಕಾರಣದಿಂದ ಗೋಶಾಲೆಗೆ ಕೊಂಡೊಯ್ಯಲಾಗುತ್ತಿತ್ತು ಎಂದು ದಿನೇಶ್ ಮೆದು ತಿಳಿಸಿದರು.
ಮುಸ್ಲಿಮರು ಅಕ್ರಮವಾಗಿ ದನಗಳ ಸಾಗಾಟ ಮಾಡುತ್ತಿದ್ದ ವೇಳೆ ತಡೆಯಲು ಮುಂದಾದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ,ದರೋಡೆ ಪ್ರಕರಣ ದಾಖಲಿಸಿಕೊಳ್ಳುತ್ತಿರುವ ಪೊಲೀಸರು  ಈ ಪ್ರಕರಣದಲ್ಲಿ ತಡೆಯಲು ಹೋದ ಮುಸ್ಲಿಂ ಮಂದಿಯ ಮೇಲೆ ಯಾಕೆ ಪ್ರಕರಣ ದಾಖಲಿಸಿಕೊಂಡಿಲ್ಲ . ನಾವು ತಡೆದರೆ ಮಾತ್ರ ನೈತಿಕ ಪೊಲೀಸ್ಗಿರಿ , ಇದು ಯಾವುದು ಅನೈತಿಕ ಪೊಲೀಸ್ ಗಿರಿಯೇ ಎಂದು ಅವರು ಪ್ರಶ್ನಿಸಿದರು .   
ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಹ ಸಂಚಾಲಕ ಸುಪ್ರೀತ್ ರೈ ಖಂಡಿಗ , ಸವಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ, ಸದಸ್ಯ ರಾಕೇಶ್ ರೈ ಕೆಡೆಂಜಿ ಉಪಸ್ಥಿತರಿದ್ದರು.
     

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...